ಕಾರ್ಪೊರೇಷನ್ ತೆರಿಗೆ

ಸಂಯುಕ್ತ ಬಂಡವಾಳ ಸಂಸ್ಥೆಗಳ-ಎಂದರೆ ಕಂಪನಿಗಳ ಅಥವಾ ಕಾರ್ಪೋರೇಷನ್‍ಗಳ-ವ್ಯಾಪಾರ ಮೌಲ್ಯ ಅಥವಾ ಬಂಡವಾಳ ಮೌಲ್ಯ, ವರಮಾನ ಇವುಗಳ ಆಧಾರದ ಮೇಲೆ ತೆರಿಗೆ ವಿಧಿಸುವುದೇ ಸಾಮಾನ್ಯವಾಗಿರುವುದರಿಂದ ಇದನ್ನು ಕಾರ್ಪೋರೇಷನ್ ವರಮಾನ ತೆರಿಗೆ ಎನ್ನಬಹುದು. ಭಾರತದಲ್ಲಿ ಕಾರ್ಪೋರೇಷನ್ ತೆರಿಗೆಯನ್ನು ಹಿಂದೆ ಅಧಿಕರ ಅಥವಾ ಮೇಲ್ತೆರಿಗೆ (ಸೂಪರ್ ಟ್ಯಾಕ್ಸ್) ಎಂದು ಕರೆಯಲಾಗಿತ್ತು. ಭಾರತದ ಸಂವಿಧಾನದಲ್ಲಿ ಇದನ್ನು ಕಾರ್ಪೋರೇಷನ್ ತೆರಿಗೆ ಎಂದು ಕರೆಯಲಾಗಿದೆ. 366(6) ನೆಯ ಅನುಚ್ಛೇದದಲ್ಲಿ ಇದನ್ನು ಕಂಪನಿಗಳ ವರಮಾನಗಳ ಮೇಲೆ ವಿಧಿಸಲಾಗುವ ತೆರಿಗೆಯೆಂದೇ ಹೇಳಲಾಗಿದೆ.

 ಕಾರ್ಪೋರೇಷನ್ ತೆರಿಗೆ ವಿಧಿಸಲು ಹಲವಾರು ರೀತಿಯ ಸಮರ್ಥನೆಗಳನ್ನು ಅರ್ಥಶಾಸ್ತ್ರಜ್ಞರು ಕೊಟ್ಟಿದ್ದಾರೆ. ವ್ಯಕ್ತಿಗಳಂತೆಯೇ ಕಂಪನಿಗಳೂ ವರಮಾನ ಪಡೆಯುತ್ತವೆ. ವ್ಯಕ್ತಿಗಳಿಗೆ ಅನ್ವಯಿಸುವ ಸಾಮಾನ್ಯ ವರಮಾನಗಳು ತೆರಿಗೆ ಇವಕ್ಕೆ ಅನ್ವಯಿಸುವುದಿಲ್ಲ. ವ್ಯಕ್ತಿಗಳಿಗೆ ವರ್ಗಾಯಿಸಿದ ವರಮಾನಗಳು ತೆರಿಗೆ ತಪ್ಪಿಸಿಕೊಳ್ಳುತ್ತವೆ. ಕಾರ್ಪೋರೇಷನ್ ತೆರಿಗೆ ಹೀಗಾಗದಂತೆ ತಡೆಯುತ್ತದೆ. ಕಂಪನಿಯ ಷೇರುದಾರರ ಪರಮಿತ ಹೊಣೆ, ಷೇರು ವರ್ಗಾವಣೆ ಸೌಕರ್ಯ, ಅವಿಚ್ಛಿನ್ನ ಕಾನೂನು ವ್ಯಕ್ತಿಯಾಗಿ ಕಂಪನಿಯ ಪರಿಗಣನೆ ಇತ್ಯಾದಿ ವಿಶೇಷ ಸೌಕರ್ಯಗಳನ್ನು ಸರ್ಕಾರ ಅವಕ್ಕೆ ದೊರಕಿಸುವುದರಿಂದ ಅವುಗಳಿಂದ ತೆರಿಗೆ ಪಡೆಯುವುದು ನ್ಯಾಯ ಎಂಬುದು ಹಕ್ಕುಬಾಧ್ಯತೆ ಸಿದ್ಧಾಂತದ (ಪ್ರಿವಿಲೇಜಸ್ ಥಿಯೊರಿ) ಪ್ರತಿಪಾದಕರ ಅಭಿಪ್ರಾಯ. ಕಂಪನಿಗಳ ಉದ್ಯಮಗಳಿಗೆ ಅಗತ್ಯವಾದ ತಾಂತ್ರಿಕ ಹಾಗೂ ಇತರ ಬಗೆಯ ಸಿಬ್ಬಂದಿಯ ಶಿಕ್ಷಣ ಹಾಗೂ ತರಬೇತಿಗಾಗಿ ಸರ್ಕಾರ ಅಗಾಧವಾಗಿ ವೆಚ್ಚ ಮಾಡುತ್ತದೆ. ಇದಕ್ಕಾಗಿ ಕಂಪನಿಗಳ ಮೇಲೆ ತೆರಿಗೆ ವಿಧಿಸುವುದು ಸರಿ ಎಂಬುದು ಒಂದು ವಾದ. ಈ ಸಂಸ್ಥೆಗಳು ಸ್ಥಾಪಿಸುವ ಭಾರಿ ಕೈಗಾರಿಕೆಗಳಿಂದ ನಗರಗಳಲ್ಲಿ ವಿಶೇಷ ಸಮಸ್ಯೆಗಳು ಉದ್ಭವವಾಗುತ್ತದೆ. ಕೊಳಚೆ ನಿರ್ಮೂಲನ, ಜನಾರೋಗ್ಯ ರಕ್ಷಣೆ, ನಗರ ನಿರ್ಮಲೀಕರಣ ಇವು ಇಂಥ ಕೆಲವು ಕ್ರಮಗಳು. ಇವಕ್ಕೆಲ್ಲ ಮೂಲತಃ ಆ ಸಂಸ್ಥೆಗಳೇ ಕಾರಣವಾಗುವುದರಿಂದ ಸರ್ಕಾರ ಅವುಗಳಿಂದ ತೆರಿಗೆ ಪಡೆಯುವುದು ಸಾಧುವಾದುದೆಂಬುದು ಕೆಲವರ ವಾದ.

 ಸಂಯುಕ್ತ ಬಂಡವಾಳ ಸಂಸ್ಥೆಗಳು ಬೃಹದ್ಗಾತ್ರದವಾದ್ದರಿಂದ ಆರ್ಥಿಕಾಧಿಕಾರ ಅವುಗಳಲ್ಲಿ ಕೇಂದ್ರೀಕೃತವಾಗುವ ಪ್ರವೃತ್ತಿ ಇರುತ್ತದೆ. ಇದರಿಂದ ಸಾಮಾಜಿಕ ಆರ್ಥಿಕ ಅಸಮತೆ ಹೆಚ್ಚಾಗಬಹುದು. ಈ ಪ್ರವೃತ್ತಿಯನ್ನು ತಡೆಗಟ್ಟಲು ಕಾರ್ಪೋರೇಷನ್ ತೆರಿಗೆ ಸ್ವಲ್ಪಮಟ್ಟಿಗೆ ಸಹಾಯಕ ಎಂಬುದು ಸಾಮಾಜಿಕ ರಾಜಕೀಯ ಸಿದ್ಧಾಂತ ಪ್ರತಿಪಾದಕರ ವಾದಸರಣಿ. ತೆರಿಗೆಯ ಒಂದು ಸಾಮಾನ್ಯ ಸಿದ್ಧಾಂತವಾದ ಸಲ್ಲಿಕೆ ಶಕ್ತಿ ಸಿದ್ಧಾಂತ ಮತ್ತು ತೆರಿಗೆ ನಿಯಮಗಳಾದ ಅನುಕೂಲಸಿಂಧು ಮತ್ತು ಸೌಕರ್ಯಗಳ ಆಧಾರದ ಮೇಲೂ ಕಾರ್ಪೋರೇಷನ್ ತೆರಿಗೆಯನ್ನು ಸಮರ್ಥಿಸುವುದುಂಟು. ವ್ಯವಸ್ಥಿತ ಸಂಸ್ಥೆಗಳಾದ ಕಾರ್ಪೋರೇಷನ್‍ಗಳು ಆರ್ಥಿಕ ಹಾಗೂ ಲಾಭ ಗಳಿಕೆ ಶಕ್ತಿಯುಳ್ಳ ಕಾನೂನು ವ್ಯಕ್ತಿಗಳಾಗಿರುವುದರಿಂದ ಇತರ ವ್ಯಕ್ತಿಗಳಂತೆಯೇ ಇವೂ ತಮ್ಮ ತೆರಿಗೆ ಸಲ್ಲಿಕೆ ಸಾಮಥ್ರ್ಯಕ್ಕೆ ಅನುಗುಣವಾಗಿ ಸರ್ಕಾರಕ್ಕೆ ತೆರಿಗೆ ನೀಡುವುದು ಸೂಕ್ತ ಎಂದು ಹೇಳಲಾಗಿದೆ. ಆಧುನಿಕ ಸರ್ಕಾರಗಳ ಖರ್ಚು ಹೆಚ್ಚಾದಂತೆ ಅದಕ್ಕಾಗಿ ಆದಾಯವನ್ನೂ ದೊರಕಿಸಿಕೊಳ್ಳುವುದರಲ್ಲಿ ತೆರಿಗೆಯ ಪಾತ್ರ ಅತಿ ಮುಖ್ಯವಾಗಿದೆ; ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಆರ್ಥಿಕಾಭಿವೃದ್ಧಿಗೆ ಹಣ ಒದಗಿಸಲೂ ತೆರಿಗೆಯ ವರಮಾನವನ್ನು ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ತೆರಿಗೆ ರಚನೆಯಲ್ಲಿ ಕಾರ್ಪೋರೇಷನ್ ತೆರಿಗೆಗೆ ಸ್ಥಾನ ಕೊಡುವುದು ಅವಶ್ಯಕ ಹಾಗೂ ಅನುಕೂಲಕರವೆಂದು ಹೇಳಲಾಗಿದೆ.

 ಹೀಗೆ ಕಾರ್ಪೋರೇಷನ್ ತೆರಿಗೆಗೆ ಸೈದ್ಧಾಂತಿಕ ಆಧಾರ ನೀಡುವ ಅನೇಕ ಪ್ರಯತ್ನಗಳನ್ನು ಅರ್ಥಶಾಸ್ತ್ರಜ್ಞರು ನಡೆಸಿದ್ದಾರೆ. ಈ ಒಂದೊಂದೂ ಒಂದೊಂದು ರೀತಿಯ ಅಪವಾದಕ್ಕೆ ಒಳಗಾಗಬಹುದಾದರೂ ವಿವಿಧ ದೃಷ್ಟಿಗಳಿಂದ ಕಾರ್ಪೋರೇಷನ್ ತೆರಿಗೆಗೆ ಸಮರ್ಥನೆ ನೀಡಬಹುದೆಂಬ ಅಂಶವನ್ನು ಇವು ವ್ಯಕ್ತಪಡಿಸುತ್ತವೆ.

 ಕಾರ್ಪೋರೇಷನ್‍ಗಳ ಮೇಲೆ ತೆರಿಗೆ ವಿಧಿಸುವುದು ನ್ಯಾಯ ಸಮ್ಮತವೆಂದು ಒಪ್ಪಿದ ಮೇಲೆ ತೆರಿಗೆ ವಿಧಿಸುವ ಕ್ರಮ ಕುರಿತು ಮುಖ್ಯ ಪ್ರಶ್ನೆ ಏಳುತ್ತದೆ. ಸಾಮಾನ್ಯ ವರಮಾನ ತೆರಿಗೆಗೆ ಅನ್ವಯಿಸುವ ನಿಯಮಗಳನ್ನೇ ಕಾರ್ಪೋರೇಷನ್ ತೆರಿಗೆಗೆ ಅನ್ವಯಿಸಲಾಗುವುದಿಲ್ಲ. ಸಾಮಾನ್ಯ ವರಮಾನ ತೆರಿಗೆಯಲ್ಲಿ ದರಗಳು ಪ್ರಗಾಮಿ ತತ್ತ್ವವನ್ನು (ಪ್ರೋಗ್ರೆಸಿವ್ ಪ್ರಿನ್ಸಿಪಲ್) ಅನುಸರಿಸಿವೆ. ಅಂದರೆ, ವರಮಾನದ ಮೊತ್ತ ಹೆಚ್ಚಿದಂತೆ ತೆರಿಗೆಯ ದರವೂ ಹೆಚ್ಚುತ್ತದೆ. ಆದರೆ, ಈ ನಿಯಮ ಕಾರ್ಪೋರೇಷನ್ ತೆರಿಗೆಗೆ ಹೊಂದುವುದಿಲ್ಲ. ಭಾರಿ ಸಂಸ್ಥೆಗಳು ಸಣ್ಣ ಸಂಸ್ಥೆಗಳ ಮೇಲೆ ಹೆಚ್ಚು ಮೆತ್ತದ ಲಾಭ ಗಳಿಸಬಹುದು. ಈ ಆಧಾರದ ಮೇಲೆ ಸಣ್ಣ ಸಂಸ್ಥೆಗಳ ಮೇಲೆ ವಿಧಿಸಲಾಗುವ ದರಕ್ಕಿಂತ ಹೆಚ್ಚು ದರದ ತೆರಿಗೆಯನ್ನು ಭಾರಿ ಸಂಸ್ಥೆಗಳ ಮೇಲೆ ವಿಧಿಸುವುದು ತೆರಿಗೆ ನ್ಯಾಯ ಸಿದ್ದಾಂತಕ್ಕೆ ಅನುಗುಣವಾಗಿರುವುದಿಲ್ಲ. ಏಕೆಂದರೆ, ಭಾರಿ ಸಂಸ್ಥೆಯ ಲಾಭದ ಮೊತ್ತ ಹೆಚ್ಚಾಗಿದ್ದರೂ ಅದರ ಬಂಡವಾಳದ ಮೊತ್ತವೂ ಹೆಚ್ಚಾಗಿರುವುದೆಂಬ ಅಂಶವನ್ನು ಮರೆಯುವಂತಿಲ್ಲ. ಒಂದು ವೇಳೆ ಈ ಹೆಚ್ಚುವರಿ ದರಗಳ ತತ್ತ್ವವನ್ನು ಅನ್ವಯಿಸುವುದಾದರೆ ಭಾರಿ ಸಂಸ್ಥೆಗಳನ್ನು ಸಣ್ಣ ಸಣ್ಣ ಸಂಸ್ಥೆಗಳಾಗಿ ಮಾಡುವ ಪ್ರವೃತ್ತಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಆದ್ದರಿಂದ, ಕಾರ್ಪೋರೇಷನ್ ಮೇಲೆ ತೆರಿಗೆ ವಿಧಿಸಲು ಪ್ರತ್ಯೇಕ ತತ್ತ್ವ ಆವಶ್ಯಕ. ತೆರಿಗೆಯ ದರಗಳು ಕಾಲಕಾಲಕ್ಕೆ ಬದಲಾಯಿಸಬಹುದಾದರೂ ಸಾಮಾನ್ಯವಾಗಿ ರಗಳ ರಚನೆಯಲ್ಲಿ ಹೆಚ್ಚು ಹಂತಗಳಿರುವುದಿಲ್ಲ. ಕಾರ್ಪೋರೇಷನ್‍ಗಳ ಬೆಳೆವಣಿಗೆ, ಆರ್ಥಿಕಾಭಿವೃದ್ಧಿಯಲ್ಲಿ ಇವುಗಳ ಪಾತ್ರ - ಈ ದೃಷ್ಟಿಯಿಂದ ವಿವಿಧ ರೀತಿಯ ವಿನಾಯಿತಿಗಳನ್ನು ಕಾರ್ಪೋರೇಷನ್ ತೆರಿಗೆ ರಚನೆ ಒಳಗೊಳ್ಳುತ್ತದೆ. ಉದಾಹರಣೆಗೆ, ಭಾರತದಲ್ಲಿ ಹೊಸದಾಗಿ ಸ್ಥಾಪಿಸಲಾಗುವ ಕೈಗಾರಿಕಾ ಕಂಪನಿಗಳಿಗೆ ತೆರಿಗೆ ಮಾಫಿ ಮಾಡಲಾಗಿದೆ. ಕೆಲವು ಬಗೆಯ ಅಭಿವೃದ್ಧಿಗಳಿಗಾಗಿ ಸೋಡಿಯನ್ನೂ ರಾಷ್ಟ್ರೀಯ ತಾಂತ್ರಿಕ ಜ್ಞಾನವನ್ನು ಉತ್ತೇಜಿಸುವ ಸಲುವಾಗಿ ಕೆಲವು ರೀತಿಯ ವಿನಾಯಿತಿಗಳನ್ನೂ ನೀಡಲಾಗಿದೆ. ಅಂದಮೇಲೆ, ತೆರಿಗೆಯ ಪರಿಣಾಮಗಳು ಒಟ್ಟಿನಲ್ಲಿ ಸಾರ್ಥಕವಾಗುವ ರೀತಿಯಲ್ಲಿ ಅದನ್ನು ವಿಧಿಸಬೇಕೆಂಬುದೇ ಸರ್ಕಾರ ಅನುಸರಿಸಬೇಕಾದ ಸಾಮಾನ್ಯ ನೀತಿ ಎಂದು ಹೇಳಹುದಾಗಿದೆ.

 ತೆರಿಗೆಯ ಸಾಧಕ ಬಾಧಕಗಳನ್ನು ಪರಿಗಣಿಸುವಾಗ, ತೆರಿಗೆಯ ಆಪಾತ (ಇನ್ಸಿಡೆನ್ಸ್), ಕಂಪನಿಗಳ ಬೆಳೆವಣಿಗೆಯ ಮೇಲೆ ಆಗುವ ಪರಿಣಾಮ, ತೆರಿಗೆಯಿಂದ ಸರ್ಕಾರಕ್ಕೆ ಬರುವ ಆದಾಯ ಮುಂತಾದ ಅಂಶಗಳನ್ನು ವಿಮರ್ಶಿಸಬೇಕು. ಕಾರ್ಪೋರೇಷನ್ ತೆರಿಗೆಭಾರ ಇತರರಿಗೆ ಪೂರ್ತಿಯಾಗಿ ಅಥವಾ ಭಾಗಶಃ ವರ್ಗವಾಗಬಹುದೆಂಬ ಒಂದು ಅಭಿಪ್ರಾಯ ಇದೆಯಾದರೂ ಸಾಮಾನ್ಯವಾಗಿ ಹಾಗೆ ಆಗುವುದಿಲ್ಲವೆಂಬುದು ಹೆಚ್ಚು ವ್ಯಾಪಕವಾಗಿ ವ್ಯಕ್ತವಾಗಿರುವ ಅಭಿಪ್ರಾಯ ಹೆಚ್ಚು ಬೆಲೆಯ ಮೂಲಕ ಅನುಭೋಗಿಗಳಿಗೂ ಕಡಿಮೆ ಲಾಭಾಂಶದ ಮೂಲಕ ಷೇರುದಾರರಿಗೂ ಕಡಿಮೆ ಕೂಲಿದರದ ಮೂಲಕ ಕಾರ್ಮಿಕರಿಗೂ ಕಾರ್ಪೊರೇಷನ್‍ಗಳು ತಮ್ಮ ವರಮಾನದ ಮೇಲೆ ವಿಧಿಸಲಾಗುವ ತೆರಿಗೆಯನ್ನು ವರ್ಗಾಯಿಸುವುದು ಕಷ್ಟವಾದುದರಿಂದ ತೆರಿಗೆ ಭಾರ ಅವುಗಳ ಮೇಲೆಯೇ ಬೀಳುವುದೆಂದು ಹೇಳಬಹುದು. ಇದರ ಪರಿಣಾಮವಾಗಿ ಅವು ತಮ್ಮೊಡನೆ ಇಟ್ಟುಕೊಳ್ಳುವ ಲಾಭಾದ ಮೊತ್ತ ಕಡಿಮೆಯಾಗಿ ಅವುಗಳ ಆಂತರಿಕ ಬಂಡವಾಳವಿಸ್ತರಣೆಯ ಬಲ ಕುಗ್ಗಿದಂತಾಗುತ್ತದೆ. ಹೀಗೆ ಕಾರ್ಪೊರೇಷನ್‍ಗಳ ಆಂತರಿಕ ಹಣಬಲ ಕಡಿಮೆಯಾಗುವುದರಿಂದ ಈ ತೆರಿಗೆ ಕೈಗಾರಿಕಾ ಬಂಡವಾಳದ ವ್ಯಯಕ್ಕೆ ಕಾರಣವಾಗುವುದೇ ಎಂಬುದು ತೆರಿಗೆಯ ವಿಧಾನವನ್ನವಲಂಬಿಸಿದೆ. ತೆರಿಗೆ ವಿಧಿಸುವ ಉದ್ದೇಶದಿಂದ ಸಂಸ್ಥೆಯ ಒಟ್ಟು ವರಮಾನದಲ್ಲಿ ಬಂಡವಾಳ ಸವೆತದ ವೆಚ್ಚವನ್ನು ಕಳೆಯುವಾಗ ಯಂತ್ರ ಹಾಗೂ ಯಂತ್ರೋಪಕರಣಗಳ ಪುನಃಸ್ಥಾಪನೆಗೆ ತಗಲಬಹುದಾದ ಮೊಬಲಗನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಕಳೆಯುವ ಏರ್ಪಾಡು ಇರುವುದಾದರೆ ಕಾರ್ಪೊರೇಷನ್ ತೆರಿಗೆಯಿಂದ ಕೈಗಾರಿಕಾ ಬಂಡವಾಳ ವ್ಯಯವಾಗುವ ಕಾರಣವಿರುವುದಿಲ್ಲ. ತೆರಿಗೆ ವಿಧಿಸದೆ ಆ ಹಣವನ್ನು ಸಂಸ್ಥೆಯಲ್ಲೇ ಇರಗೊಟ್ಟಿದ್ದರೆ ಅದು ವಿನಿಯೋಜನೆಯ (ಇನ್ವೆಸ್ಟ್‍ಮೆಂಟ್) ವಿಸ್ತರಣೆಗೆ ಒದಗಿ ಬರುತ್ತಿತ್ತೆಂದೂ ಇದನ್ನು ತೆರಿಗೆಯ ರೂಪದಲ್ಲಿ ಸರ್ಕಾರ ಪಡೆಯುವುದರಿಂದ ಅದಕ್ಕೆ ಅಡ್ಡಿಯಾಗುತ್ತಿದೆಯೆಂದೂ ವಾದಿಸಲಾಗಿದೆ. ಆದರೆ ಇತರ ತೆರಿಗೆಗಳಂತೆ ಕಾರ್ಪೊರೇಷನ್ ತೆರಿಗೆಯೂ ಸರ್ಕಾರದ ಒಟ್ಟು ಖರ್ಚಿಗೆ ಹಣ ಒದಗಿಸಲು ಸಹಾಯಕ ವಾಗಬೇಕೆಂಬುದಾಗಿ ನಿರೀಕ್ಷಿಸುವುದು ಅಸಹಜವಲ್ಲ. ತೆರಿಗೆಯ ರೂಪದಲ್ಲಿ ವಸೂಲಿಯಾದ ಹಣದ ಒಂದು ಭಾಗ-ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ-ಸರ್ಕಾರಿವಲಯದ ಉದ್ಯಮಗಳಲ್ಲಿ ವಿನಿಯೋಜನೆಗೆ ಒದಗಿಬರುವುದೆಂಬ ಅಂಶವೂ ಗಮನಾರ್ಹ. ಕಾರ್ಪೊರೇಷನ್ ವಲಯಕ್ಕೆ ಅದಾಯ ದೊರಕುವಂತೆ, ಸಮಾಜದಲ್ಲಿಯ ವರಮಾನಗಳ ಅಂತರ ತಗ್ಗುವಂತೆ, ಸರ್ಕಾರಕ್ಕೆ ಅದಾಯ ದೊರಕುವಂತೆ ಕಾರ್ಪೊರೇಷನ್ ತೆರಿಗೆಯನ್ನು ರೂಪಿಸಿದರೆ ಅದರಿಂದ ದುಷ್ಟರಿಣಾಮಗಳನ್ನು ನಿವಾರಿಸಿ, ದೇಶದ ಅರ್ಥ ವ್ಯವಸ್ಥೆಗೆ ಅನುಕೂಲವಾಗುವಂತೆ ಮಾಡುವುದು ವಿವೇಕಪೂರಿತ ಹಣಕಾಸು ನೀತಿಯೆನಿಸಿ ಕೊಳ್ಳುತ್ತದೆ.

 ಆರ್ಥಿಕಾಭಿವೃದ್ಧಿಯೊಡನೆ ಕಾರ್ಪೊರೇಷನ್‍ಗಳೂ ಬೆಳೆಯುವುದರಿಂದ ಕಾರ್ಪೊರೇಷನ್ ತೆರಿಗೆಯ ವರಮಾನವೂ ಸಾಮಾನ್ಯವಾಗಿ ಆರ್ಥಿಕಾಭಿವೃದ್ಧಿಯೊಡನೆ ಹೆಚ್ಚುತ್ತ ಹೋಗುತ್ತದೆ. 1950ರ ದಶಕದ ವಾರ್ಷಿಕ ಸರಾಸರಿ ಲೆಕ್ಕದ ಪ್ರಕಾರ ಕಾರ್ಪೊರೇಷನ್ ತೆರಿಗೆಯಿಂದ ಸರ್ಕಾರಕ್ಕೆ ಸಂದಾಯವಾದ ಹಣ ಅಮೆರಿಕ, ಬ್ರಿಟನ್ ಇತ್ಯಾದಿ ಮುಂದುವರಿದ ದೇಶಗಳಲ್ಲಿ ಅವುಗಳ ರಾಷ್ಟ್ರೀಯ ವರಮಾನದ ಸುಮಾರು ಸೇಕಡ 5ರಷ್ಟಿತ್ತು. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಇದು ಸೇಕಡ 1ಕ್ಕೂ ಕಡಿಮೆಯಾಗಿತ್ತು. ಭಾರತದಲ್ಲಿ ಕಾರ್ಪೊರೇಷನ್ ತೆರಿಗೆಯ ಪ್ರಾಮುಖ್ಯ ಬೆಳೆಯುತ್ತಿದೆಯೆಂಬುದನ್ನು ಇದರಿಂದ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಆದಾಯದಿಂದ ತಿಳಿಯಬಹುದು. 1937-38ರಲ್ಲಿ ಸರ್ಕಾರಕ್ಕೆ ಕೇವಲ ಸುಮಾರು ರೂ 2ಕೋಟಿ ವರಮಾನ ತರುತ್ತಿದ್ದ ಕಾರ್ಪೊರೇಷನ್ ತೆರಿಗೆ 1950ರ ದಶಕದಲ್ಲಿ ಸರಾಸರಿಯಲ್ಲಿ ವರ್ಷವೊಂದಕ್ಕೆ ರೂ 56 ಕೋಟಿಯನ್ನೂ 1961-66ರಲ್ಲಿ ರೂ. 248 ಕೋಟಿಯನ್ನೂ 1966-70ರಲ್ಲಿ ವರ್ಷಕ್ಕೆ ಸುಮಾರು ರೂ. 320 ಕೋಟಿಯನ್ನೂ-ಎಂದರೆ, ತೆರಿಗೆ ರೂಪದ ಒಟ್ಟು ವಾರ್ಷಿಕಾದಾಯದ ಸುಮಾದು ಸೇ. 14ರಷ್ಟನ್ನು-ದೊರಕಿಸಿಕೊಟ್ಟಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳವನ್ನು ಒದಗಿಸುವುದರಲ್ಲಿ ತೆರಿಗೆಯ ಪಾತ್ರವೂ ಮುಖ್ಯವಾಗಿರುವ ಇಂದು ಕಾರ್ಪೊರೇಷನ್ ತೆರಿಗೆ ಸಲ್ಲಿಸುತ್ತಿರುವ ಹಣಭಾಗ ಗಣನೀಯವಾದ್ದು.        (ಎ.ಪಿ.ಎಸ್.)

 ವಿವಿಧ ದೇಶಗಳಲ್ಲಿ : ಕಾರ್ಪೊರೇಷನ್ ತೆರಿಗೆಯನ್ನು ಮೊಟ್ಟಮೊದಲನೆಯ ಬಾರಿಗೆ 1840ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಪೆನ್ಸಿಲ್ವೇನಿಯ ರಾಜ್ಯದಲ್ಲಿ ಬಂಡವಾಳ-ಸ್ಕಂಧ ತೆರಿಗೆಯ ರೂಪದಲ್ಲಿ ಹಾಕಲಾಯಿತು. ಮುಂದೆ ಸಂಯುಕ್ತಸಂಸ್ಥಾನದ ಅನೇಕ ರಾಜ್ಯಗಳು ಪೆನ್ಸಿಲ್ವೇನಿಯವನ್ನು ಅನುಸರಿಸಿದುವು. 1920ರಲ್ಲಿ ಸೇ. 10ರಷ್ಟಿದ್ದ ಈ ತೆರಿಗೆಯನ್ನು ಸರ್ಕಾರಗಳು ಕ್ರಮಕ್ರಮವಾಗಿ ಹೆಚ್ಚಿಸುತ್ತ ಬಂದಿವೆ. ಪ್ರತಿಯೊಬ್ಬ ಷೇರುದಾರನೂ ಕಂಪನಿಯಿಂದ ಲಾಭಾಂಶವನ್ನು ಪಡೆದಾಗ ಅ ಲಾಭಾಂಶದ ಮೇಲೂ ತೆರಿಗೆಯನ್ನು ಹಾಕ್ಕಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತು. ಇದಲ್ಲದೆ. ಕಂಪನಿ ಹಂಚದೆ ತನ್ನಲ್ಲಿಯೇ ಉಳಿಸಿಕೊಂಡ ಲಾಭಾಂಶದ ಮೇಲೂ ತೆರಿಗೆಯನ್ನು ಹಾಕಲು ಪ್ರಯತ್ನಪಟ್ಟಿತು.

 ಬ್ರಿಟನಿನಲ್ಲಿ ಕಾರ್ಪೊರೇಷನ್ ತೆರಿಗೆಯನ್ನು ನಿಗದಿಪಡಿಸಿದ ಒಂದು ದರದಲ್ಲಿ ಹಾಕಲಾಗುವುದು. ಆದರೆ ಕಂಪನಿಯ ಷೇರುದಾರರು ಲಾಭಾಂಶರೂಪದಲ್ಲಿ ಪಡೆದ ಭಾಗದ ಮೇಲೆ ತೆರಿಗೆ ಕೊಡಬೇಕಾಗಿಲ್ಲ.

 ಕಾರ್ಪೊರೇಷನ್ ತೆರಿಗೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಷ್ಟ್ರವೂ ಎದುರಿಸಬೇಕಾದ ಪ್ರಶ್ನೆಗಳಲ್ಲಿ ಇರ್ತೆರಿಗೆಯನ್ನು ಕುರಿತದ್ದೂ ಒಂದು. ಪ್ರತಿಯೊಂದು ಕಂಪನಿಯೂ ತನ್ನ ಲಾಭಾಂಶದ ಮೇಲೆ ಒಂದು ನಿರ್ದಿಷ್ಟ ದರದಲ್ಲಿ ತೆರಿಗೆಯನ್ನು ಕೊಟ್ಟಮೇಲೆ ಮತ್ತು ತನ್ನ ಷೇರುದಾರರಿಗೆ ಲಾಭಾಂಶವನ್ನು ಹಂಚಿದಾಗ ಅವರು ಈ ವರಮಾನದ ಮೇಲೆ ಮತ್ತೆ ತೆರಿಗೆ ಕೊಡಬೇಕೇ ಎಂಬುದು ಪರಿಗಣಿಸಬೇಕಾದ ಪ್ರಶ್ನೆ. ಷೇರುದಾರರು ಕಂಪನಿಯ ಮಾಲೀಕರು. ಆದ್ದರಿಂದ ಅವರ ಪಾಲಿನ ಮೇಲೆ ಮತ್ತೆ ತೆರಿಗೆ ಹಾಕುವುದೆಂದರೆ ಒಂದೇ ವರಮಾನದ ಮೇಲೆ ಎರಡನೆಯ ಸಾರಿ ತೆರಿಗೆ ಹಾಕಿದಂತೆ. ಬ್ರಿಟನಿನಲ್ಲಿ ಷೇರುದಾರರು ತಮಗೆ ಬಂದ ಶಿಷ್ಟಲಾಭಾಂಶದ ಮೇಲೆ ತೆರಿಗೆ ಕೊಡಬೇಕಾಗಿಲ್ಲ. ಕೆನಡ ಮತ್ತು ಅಮೆರಿಕಗಳು ಈ ದಿಕ್ಕಿನಲ್ಲಿ ಅನೇಕ ರಿಯಾಯಿತಿಗಳನ್ನು ತೋರಿಸುತ್ತ ಬಂದಿವೆ. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಬರತಕ್ಕ ಲಾಭದ ಪಾಲಿನ ಮೇಲೆ ಸಹ ಅನೇಕ ಸರ್ಕಾರಗಳು ತೆರಿಗೆ ಹಾಕುವ ಪದ್ಧತಿ ಇಟ್ಟುಕೊಂಡಿವೆ. ಸ್ವೀಡನ್ ಈ ಕ್ರಮ ಅನುಸರಿಸುವುದಿಲ್ಲ. ಫ್ರಾನ್ಸ್ ದೇಶ ಹೀಗೆ ಬಂದವರಮಾನದಲ್ಲಿ ಸೇ. 95ರಷ್ಟನ್ನೂ ಅಮೆರಿಕ ಸಂಯುಕ್ತಸಂಸ್ಥಾನ ಸೇ. 85ರಷ್ಟನ್ನೂ ತೆರಿಗೆ ವಿಧಿಸುವಂಥ ವರಮಾನವೆಂದೇ ಪರಿಗಣಿಸುವುದಿಲ್ಲ. ಭಾರತದಲ್ಲಿ ಅಂಥ ವರಮಾನದಲ್ಲಿ ಸೇ. 40 ರಷ್ಟದ ಮೇಲೆ ತೆರಿಗೆ ಹಾಕಲಾಗುತ್ತದೆ.

 ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಪೊರೇಷನ್ ತೆರಿಗೆಯನ್ನು ಒಂದೇ ನಿರ್ದಿಷ್ಟದರದಲ್ಲಿ ಹಾಕಲಾಗುತ್ತದೆ. ವಿಶ್ವದ ಸುಮಾರು 150 ರಾಷ್ಟ್ರಗಳ ಪೈಕಿ 143 ರಾಷ್ಟ್ರಗಳಲ್ಲಿ ತೆರಿಗೆಯ ದರ ಸೇ. 50ಕ್ಕಿಂತ ಹೆಚ್ಚಿಲ್ಲ.

 ಕಾರ್ಪೊರೇಷನ್ ತೆರಿಗೆಯ ದರಕ್ಕಿಂತ ವ್ಯಕ್ತಿ ವರಮಾನ ತೆರಿಗೆಯ ದರ ಅಧಿಕವಾಗಿದ್ದಾಗ ವ್ಯಕ್ತಿಗಳು ತೆರಿಗೆ ತಪ್ಪಿಸಿಕೊಳ್ಳಲು ಅವಕಾಶವುಂಟು. ಕಂಪನಿ ತನ್ನ ಷೇರುದಾದರಲ್ಲಿ ಹಂಚಬಹುದಾದ ಲಾಭವನ್ನೆಲ್ಲ ಹಂಚದೆ, ಅದನ್ನು ಸಂಚಿತ ನಿಧಿಗೆ ವರ್ಗಾಯಿಸುತ್ತ ಹೋಗಬಹುದು. ಇದರಿಂದ ತಾತ್ಕಾಲಿಕವಾಗಿ ಷೇರುದಾರರ ವರಮಾನ ಕಡಿಮೆಯಾಗುವುದಾದರೂ ಮುಂದೆ ಅವರು ಬೇರೊಂದು ರೂಪದಲ್ಲಿ ಆ ಲಾಭವನ್ನು ಪಡೆಯಬಹುದು. ಈ ರೀತಿ ತೆರಿಗೆ ತಪ್ಪಿಸಿಕೊಳ್ಳದಂತೆ ತಡೆಗಟ್ಟುವ ಉದ್ದೇಶದಿಂದ ಕೂಡಿಬಂದ ಲಾಭದ ಮೇಲೂ ತೆರಿಗೆ ಅನೇಕ ರಾಷ್ಟ್ರಗಳು ಮುಂದಾಗಿವೆ. ಅದರಲ್ಲಿ ಭಾರತವೂ ಒಂದು.

 ಅಂತರರಾಷ್ಟ್ರೀಯ ವ್ಯಾಪ್ತಿಯುಳ್ಳ ಕಂಪನಿಗಳು ಯಾವ ಯಾವ ದೇಶಗಳಲ್ಲಿ ಎಷ್ಟೆಷ್ಟು ಲಾಭಾಗಳಿಸುತ್ತವೆಯೋ ಅಷ್ಟಷ್ಟರ ಮೇಲೆ ಮಾತ್ರವೇ ಆಯಾ ದೇಶಗಳ ಸರ್ಕಾರಗಳಿಗೆ ತೆರಿಗೆ ಕೊಡಬೇಕಂಬ ತತ್ತ್ವಕ್ಕೆ ಅನೇಕ ರಾಷ್ಟ್ರಗಳು ಮನ್ನಣೆ ನೀಡಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

        

(ಕೆ.ಜಿ.ಆರ್.)